3/16/10

"ಯಾರೊಡನೆಯು ಹೇಳುವುದಿಲ್ಲ ತಾನೆ ಇದನು ?!" ಎಂದು ಸ್ನೇಹಿತರ ಕೇಳುವ ವಿಧಿ ಕಾಡದಿರಲಿ;
ಆ ಪ್ರಶ್ನೆಯನೆ ಪ್ರಶ್ನಿಸುವಷ್ಟು ಸ್ನೇಹವಿರಲಿ ಸ್ನೇಹಿತರಲಿ, ನಂಬುಗೆಯರಲಿ ಅವರ ಸ್ನೇಹದಲಿ !! -ಸಂK

(inspired by sms - Trust ur friend that much that u Dont have to tell, ‘Dont tell dis 2 anyone’)

ಹೊಸ ಯುಗದ ಆದಿ

ವಿಕೃತಿಗಳನಡಗಿಸುವ,
ವಿಕೃತಿಗಳಳಿದ ಹೊಸ ಯುಗದ ಆದಿಗೆ ನಾಂದಿ ಹಾಡುವ;
ಸುಕೃತಿಗಳನೆಸಗುವ,
ಸುಕೃತಿಗಳನೆಸಗಿ ಜಗದಿ ಸಿರಿಸೊಬಗ, ನಗು ನಲಿವ ಹರಸುವ ! - ಸಂK

10/1/09

ಗಾಂಧಿ.. ಎಂಬ ಮನಸ್ಥಿತಿ !



ಮೊದಲ ಬಾರಿಗೆ "ಗಾಂಧಿ" ಎನ್ನುವ ಹೆಸರನ್ನು ಅಥವಾ ಪದವನ್ನು ಕೇಳಿದ್ದು ಯಾವಾಗ ಅನ್ನೋದು ನೆನಪೆ ಬರ್ತಾ ಇಲ್ಲ. ಅಷ್ಟು ಹಳತಾಗಿ ಹೋಗಿದೆ "ಗಾಂಧಿ" ಎಂಬ ಪದ ಬದುಕಿನಲ್ಲಿ. ಮೋಹನ ದಾಸ ಕರ್ಮಚಂದ್ ಗಾಂಧಿ "ಮಹಾತ್ಮ ಗಾಂಧಿ"ಯಾಗಿ "ಮಹಾತ್ಮ"ರಾಗಿ ಕೊನೆಗೆ ಗಾಂಧಿಯಾಗಿ ಯಾವಾಗ ಹೇಗೆ ರೂಪಾಂತರಗೊಂಡರೋ ಗೊತ್ತಿಲ್ಲ.ಆದರೆ ಇಂದು ಗಾಂಧಿ ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ. ಗಾಂಧಿ ಒಂದು ಮನಸ್ಥಿತಿಯಾಗಿ ಬಿಟ್ಟಿದೆ....ಶಾಂತಿ,ಅಹಿಂಸೆಗಳೆಂಬ ಕಲ್ಪನೆಗಳಿಗೆ ಬಣ್ಣಕಟ್ಟುವ, ಅದನ್ನು ಮೂರ್ತರೂಪಕ್ಕೆ ಇಳಿಸುವ, ಸತ್ಯಂ ಶಿವಂ ಸುಂದರಂ ಅನ್ನುತ್ತಾ ಸತ್ಯದಲ್ಲಿ ಸೌಂದರ್ಯವನ್ನು ಹಾಗೂ ಶಿವನನ್ನು ಕಾಣುವ, ವ್ಯಕ್ತಿಗಿಂತ ವಿಚಾರಗಳನ್ನು ಆದರಿಸುವ, ಅಂದು ಕೊಂಡದ್ದನ್ನು ಸಾಧಿಸಿಯೇ ತೀರಿಸುವ, ಸಾಮಾನ್ಯ ಮಹಾತ್ಮನಾಗುವ ಅಸಾಮಾನ್ಯ ಮತ್ತು ತನ್ನೊಳಗಿನ ಮಹಾತ್ಮನ ಮುಂದೆ ತಾನೆ ಸಾಮಾನ್ಯನಾಗಿ ಬಿಡುವ, ಕೊನೆಗೆ ಎಲ್ಲರಿಗೂ ಸಹಾಯಮಾಡ ಹೊರಟು ತಾನೆ ಅಸಹಾಯಕನಾಗಿ ಬಿಡುವ ಮನಸ್ಥಿತಿಗೊಂದು ಪದವಾಗಿಬಿಟ್ಟಿದೆ. ಹಾಗಾಗಿ ಗಾಂಧಿ ಎಂಬ ಮನಸ್ಥಿತಿಯ ತಲಪುವ ಕ್ರಿಯೆಯಲ್ಲಿ ಪ್ರತಿಯೊಬ್ಬನಿಗೂ ಒಬ್ಬಬ್ಬ ಗಾಂಧಿ ಕಂಡುಬರುತ್ತಿರುವುದರಲ್ಲಿ ಆಶ್ಚರ್ಯವೇನು ಇಲ್ಲ. ಈ ದಿನ ಪ್ರತಿಯೊಬ್ಬರು ಗಾಂಧಿಯೆಂಬ ವ್ಯಕ್ತಿಯ ಕುರಿತು ಅವರವರದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೆ ಅದು ಗಾಂಧಿ ಎಂಬ ಮನಸ್ಥಿತಿಯ ಒಂದು ಪ್ರಕಟಿತ ರೂಪ ಅಷ್ಟೇ !!

ಗಾಂಧಿಯೆಂಬ ಮನಸ್ಥಿತಿಯ ಕಲ್ಪನೆಯ ಮೂರ್ತರೂಪ - ಗಾಂಧಿಯ ಜನ್ಮ ದಿನ ಇಂದು. ನನ್ನ ಕಡೆಯಿಂದ ನಮನ ಗಾಂಧಿಗೆ, ಗಾಂಧಿ.. ಎಂಬ ಮನಸ್ಥಿತಿಗೆ !!

8/1/09

ಮರೆವು

೧. ಈ ಮರೆವೆನ್ನುವುದೆ ಹೀಗೆ..
ಕಳಚಿಬಿದ್ದ ಮೊಳೆಯ ಗುರುತ
ಮುಚ್ಚುವ ಸುಣ್ಣದ ಹಾಗೆ;
ಎಷ್ಟಿದ್ದರು ಒಳಗಿರುವ ನೋವು
ಮುಚ್ಚಿ ಬಿಡುವುದು ಹೊರಗೆ ಕಾಣದ ಹಾಗೆ !

೨. ಹಳೆಯ ನೋವುಗಳ ತೆರಯ ಮರೆಗೆ ಕಳಿಸುವ
ಹೊಸಕನಸುಗಳಿಗೆ ದಾರಿ ಸುಗಮಗೊಳಿಸುವೀ ಮರೆವು;
ಬಣ್ಣಗೆಟ್ಟಿದ್ದ ಆಗಸದಲ್ಲಿ ಕಾಮನಬಿಲ್ಲ ಕಟ್ಟುವ
ಮಧ್ಯಾಹ್ನದ ಮಳೆಯ ಮುಂಚಿನ ಮೋಡದ ಹಾಗೆ !!

ನೆನಪು

೧. ಈ ಸಣ್ಣ ಸಣ್ಣ ನೆನಪುಗಳೆ ಹೀಗೆ..
ಗೋಡೆಯ ಮೇಲಿನ ಸಣ್ಣ ಮೊಳೆಯ
ದೊಡ್ಡ ನೆರಳಿನ ಹಾಗೆ,
ಒಳಗಿಳದಿದ್ದಕ್ಕಿಂತ ಹೊರಗ್
ಹರಡಿದ್ದೆ ಹೆಚ್ಚು !

೨. ಭೂತಕಾಲದ ಭವ್ಯತೆಯ ಬೆರಗಿನಲ್ಲಿ ಮುಳುಗಿಸುವ
ಭವಿಷ್ಯಕ್ಕೆ ಬಣ್ಣಬಣ್ಣದ ನೆನಪುಗಳ ಸೃಷ್ಟಿಸುವ ಈ ನೆನಪು...
ತಾನು ಕಪ್ಪುಬಿಳುಪಿನಲ್ಲಿದ್ದರು ವರ್ತಮಾನಕ್ಕೆ ಬಣ್ಣಕಟ್ಟುವ
ಮಧ್ಯಾಹ್ನದ ಮಳೆಯ ನಡುವಿನ ಕಾಮನಬಿಲ್ಲಿನ ಹಾಗೆ !!