Pages

4/7/08

“ ಕನ್ನಡ ಪದ-ಗೋಳು ”

ರತ್ನನ ಕನ್ನಡ ಪದಗಳು ಏರಿಸಿದ್ದ ನಾಡು ನುಡಿಯ ನಶೆ ಇಂದು ಇಳಿದಿದೆ। ಇಂದಿನ ಪರಿಸ್ಥಿತಿಯನ್ನು ತಿಳಿಸೋ ಪ್ರಯತ್ನವೇ ಕನ್ನಡ ಪದ-ಗೋಳು.

ಕನ್ನಡದಲ್ಲೇ ಮಾತಗಳನ್ ಆಡಬೇಕು
ಅಂತಾ ನೀ ಏನ್ರ ಅಂದ್ ಬುಟ್ರೆ ಈವತ್ತು
ದೇವ್ರೆ ಇದ್ರು ನಿನ್ ಜೊತ್ಗೆ
ತಪ್ಸಕ್ಕಾಗ್ದು ನಿನ್ ಪ್ರಾಣಕ್ ಮಾನಕ್ ಕುತ್ನ

ಬೆಂಗಳೂರ್‍ನಾಗೆ ಇಂಗ್ನೀಸದೇ ಕಾರ್‍ಬಾರ್
ಕನ್ನಡ ಮಾತಾಡಿದ್ರೆ ದಾರೀಲ್ ಹೋಗೊ ಜನ್‍ಗಳೆಲ್ಲ
ಮಾತಾಡ್ದವ್ನ ತಿರ್‍ತಿರುಗಿ ನೋಡ್ತಾರ್
ಒಡ್ದಂಗ್ ಜೇನ್ಗೆ ಕಲ್ಲ

ಯೆಂಡ ಕುಡಿದಿದ್ರೆ ಲೋಕ್‍ದಾಗ್ ಮರ್ವಾದೆ ಹೋಯ್ತದೆ
ಯೆಡ್ತೀನ್ ಬುಟ್ರೆ ಕೋಳ್ಟಾಗೆ ಕೇಸ್ ಆಯ್ತದೆ
ಬೇಡ್‍ದಿದ್ರು ಸರಿಯೇ ಎಲ್ಡನ್ನು ಕಟ್ಕೊಂಡಾರು ನಮ್ ಜನ
ಕನ್ನಡ ಪದಾನ್ ಬುಟ್ರು ಅಳೊರ್ಯಾರು?ಜೀವ್ನ ಎಂಗೋ ಸಾಗ್ತದೆ

ಸ್ವರ್ಗಕ್ ಸೇರ್ಸಿ , ಸೀ ಅನ್ ತಿನ್ಸಿ
ಒಂದಾನ ಕನ್ನಡ ಪದವಾಡೂಂದ್ರೇ
ಮೂಗ್‍ಮುರ್ದು ಕನ್ನಡಾನ್ ಬಯ್ತಾರೆ ಇಂಗ್ಲೀಸ್ನಾಣೆ
ನಮ್ಮ್ ಜನಗಳ ಹುಚ್ಚ್ ಬುದ್ದೀನ್ ನೀ ಕಾಣೆ

ದೇಸ ಸುತ್ತ್‍ಬೇಕಂತೆ , ಭಾಸೆ ಕಲಿಬೇಕಂತೆ ;
ಮನ್ಸ ಮನ್ಸನ್ ಮನ್ಸನ್ನ ಅರತ್ಕೊಳಕೆ
ಗ್ನಾನದ್ ದಾಹ ನೀಗ್ಸಕ್ಕೆ ಯಾವ ಭಾಸೆ ನೀರ್‍ ಎರೆದ್ರೆನಂತೆ ;
ಸಾವ್ರ ಭಾಸೆ ಕಲ್ತ್ ಮಾತ್ರಕ್ ನಮ್ ಭಾಸೆ ಮರೆಯೋದ್ ಯಾಕಂತೆ ?!

ಕ್ಷಮಿಸ್ ಬುಡ್ ರತ್ನ ಬದಲಾಸಿದ್ದಕ್ಕೆ "ಕನ್ನಡ ಪದಗೊಳ್”ನ
ಹಂಚಕೊಂಡಿವ್ನಿ ಕನ್ನಡದವ್ನ್ ಮನಸ್ಸ್ನಲ್ ಮೂಡಿದ್ ಗೋಳ್ನ
ಬರೇ ವ್ಯರ್ಥ ಸುಮ್ನೆ ಹಳಿದ್ರೆ ಅರಿತ್ಕೊಳ್ದ ಜನಗಳ್ನ
ಅರತ್ಕೊಂಡ್ ಬದಲಾಸ್ಕೊಂಡ್ರೆ ಮನ್ಸಿನ್ ಬೆಂಕಿಗೆ ವಸಿ ಶಮ್ನ

No comments: