Pages

4/7/08

ಹುಡುಗಾ(ಕಾ)ಟದ ಹುಡುಗ

ಅವನು ಹುಡುಗಾಟದ ಹುಡುಗ
ಅವಳು ಹುಡುಕಾಟದ ಹುಡುಗಿ.
ಅವನು ಹುಡುಕಾಟಕ್ಕಾಗಿ ಪ್ರೇಮಿಸಿದ,
ಹುಡುಗಾಟ ಬಿಟ್ಟು ಪೂರ್ಣ-ಪ್ರೇಮಕ್ಕಾಗಿ ಪರಿತಪಿಸಿದ.

ಅವಳು ಹುಡುಕಾಟಕ್ಕಾಗಿ ಅನುಸರಿಸಿದಳು
ಹುಡುಕಾಟ ಬಿಡಲಿಲ್ಲ , ಹೊಂಗನಸುಗಳಿಗಾಗಿ ಕನವರಿಸಿದಳು.
ಅವನು ಮನಬಿಚ್ಚಿ ಹೇಳಿದನು;
ಅವಳು ಮನವಿಟ್ಟು ಕೇಳಿದಳು.

ಅವಳೇನು ಹೇಳಲಿಲ್ಲ; ಆದರೂ ಇವನೆ ಏನೇನೋ ಹೇಳಿಕೊಂಡನು
ಅವಳು ಸಮಯಕ್ಕಾಗಿ ಕಾದಳು ; ಪದಗಳಿಗಾಗಿ ಹುಡುಕಿದಳು
ಅವಳು ಹೇಳಿದಾಗ ಕೇಳಲಾಗಲಿಲ್ಲ ಇವನಿಗೆ
ಹುಡುಗಾಟಕ್ಕಾಗಿ ಕೊರಗಿದನು

ಈಗ ಅವನು ಹುಡುಕಲಾರಂಭಿಸಿದ ತನ್ನೊಳಗಿನ ತನ್ನನು
ಅವಳ ಹುಡುಕಾಟ ನಿಲ್ಲಲಿಲ್ಲ , ಅವನ ಹುಡುಗಾಟ ನಿಂತಿತು.
ಇಬ್ಬರು ಹುಡುಕುತ್ತಿದ್ದರೂ, ಅವರೀಗ ಸಮಾನಾಂತರ ರೇಖೆಗಳು
ದೂರ ತೀರದಲ್ಲಿಬ್ಬರು ಸೇರಬಹುದೆಂಬುದು ಆಸೆಯ ಅಲೆಗಳು

ಜಗದ ವ್ಯಾಕರಣ ಒಗ್ಗುವುದಿಲ್ಲ ಮನಸ್ಸುಗಳ ಸಾಹಿತ್ಯಕೆ
ನಾಮಪದದ ಹಂಗಿಲ್ಲ ಈ ನಿರಂತರ ಪ್ರೇಮ (?!) ಕಾವ್ಯಕೆ
ಅವಳು ಅವನು ಅಥವಾ ಅವನು ಅವಳಾಗಬಹುದಿಲ್ಲಿ
ಹುಡುಗಾಟ ಹುಡುಕಾಟವಾದರೂ ಈ ಪ್ರೇಮಕತೆಗೆ ಕೊನೆಯೆಲ್ಲಿ ?

No comments: