Pages

3/5/09

ದಿನಕ್ಕೊಂದು ಒಳ್ಳೆ ಕೆಲಸ !!

ನಾನು ಇವತ್ತು ಅಮ್ಮನಿಗೆ ತರಕಾರಿ ತಂದು ಕೊಟ್ಟೆ.
ನಾನು ಇವತ್ತು ಚಿಕ್ಕ ಹುಡುಗನೊಬ್ಬನನ್ನು ರಸ್ತೆ ದಾಟಿಸಿದೆ.
ನಾನು ಇವತ್ತು ಮನೆಯ ಮುಂದಿನ ಮೂಲಂಗಿ ಗಿಡಕ್ಕೆ ನೀರು ಹಾಕಿದೆ.
......................... ಅಜ್ಜಿಗೆ ಎಲೆ ಅಡಿಕೆ ತಂದು ಕೊಟ್ಟೆ.
...................... ತಂಗಿಯಾ ಮನೆಕೆಲಸ ಮಾಡಿಕೊಟ್ಟೆ.

ಏನಪ್ಪಾ ಇದೆಲ್ಲ ಅಂದು ಕೊಂಡಿರಾ ? ಇದೆಲ್ಲ ನನ್ನ ಬಾಲ್ಯದ ನೆನಪುಗಳು. ಹೀಗೆ ಸುಮ್ಮನೆ ಬಾಲ್ಯದ ಘಟನೆಗಳನ್ನು ನೆನಸಿಕೊಳ್ಳುತ್ತಿದ್ದಾಗ ನೆನಪಿಗೆ ಬಂದದ್ದು ನಾನು ಪ್ರೈಮರಿ ಸ್ಕೂಲ್ನಲ್ಲಿದ್ದಾಗ ಬರೆಯುತ್ತಿದ್ದ "ದಿನಕ್ಕೊಂದು ಒಳ್ಳೆ ಕೆಲಸ" ! ಆಗೆಲ್ಲ ಈಗಿನಂತೆ ಪ್ರಾಜೆಕ್ಟ್ ಗಳ ಭರಾಟೆ ಇರಲಿಲ್ಲ ನಮ್ಮ ಶಾಲೆಯಲ್ಲಿ. ಆಗ ಮಾಮೂಲಿ ಹೋಂ ವರ್ಕ್ ಜೊತೆಗೆ ನಮಗೆ ಇದ್ದ ಒಂದೆ ಒಂದು ವಿಶಿಷ್ಟ ಹೋಂ ವರ್ಕ್ ಅಂದ್ರೆ "ದಿನಕ್ಕೊಂದು ಒಳ್ಳೆ ಕೆಲಸ" !! ವಾರಕ್ಕೊಮ್ಮೆ ನೋಡುತ್ತಿದ್ದರು ವಾರಕ್ಕಾಗುವಷ್ಟು ಒಳ್ಳೆ ಕೆಲಸವನ್ನು ಹುಡುಕಬೇಕಾಗುತ್ತಿತ್ತು. ಬರೆದದ್ದನ್ನೇ ಬರೆಯುವ ಹಾಗಿಲ್ಲ :(. ಅದದೇ ಒಳ್ಳೆಯ ಕೆಲಸಗಳನ್ನು ಮತ್ತೆ ಮತ್ತೆ ಯಾಕೆ ಮಾಡಬಾರದು ಎಂಬುದು ನಮ್ಮ ತರ್ಕ. ಆದ್ರೆ ನಮ್ಮ ತರ್ಕ ಕೇಳೋರ್ಯಾರು ? ಹಾಗಾಗಿ ವಿಧಿಯಿಲ್ಲದೆ ಹೊಸ ಹೊಸ ಒಳ್ಳೆಯ ಕೆಲಸಗಳನ್ನು ಹುಡುಕಲೆ ಬೇಕಾಗುತ್ತಿತ್ತು. ಹೀಗೆ ನನ್ನ ಹೈಯರ್ ಪ್ರೈಮರಿ ಸ್ಕೂಲ್ ನ ಮೂರು ವರುಷಗಳಲ್ಲಿ ಹೊಸ ಹೊಸ ಒಳ್ಳೆಕೆಲಸಗಳನ್ನ ಬರೆದದ್ದಾಯ್ತು ( ಪ್ರತಿ ವರುಷ ಕ್ಲಾಸ್ ಟೀಚರ್ ಬೇರೆಯವರದ್ದರಿಂದ ಹಳತನ್ನೇ ಕಾಪಿ ಹೊಡೆದದ್ದು ಬಹಳ ಗುಟ್ಟಿನ ವಿಚಾರ, ಇದನ್ನು ಮಾತ್ರ ನಮ್ಮ ಮೇಡಂ ಗೆ ಹೇಳ್ ಬೇಡಿ ಪ್ಲೀಸ್ ..). ನಾನು ಗ್ರೂಪ್ ಲೀಡರ್ ಆಗಿದ್ದರಿಂದ ನನ್ನ ಪುಸ್ತಕವನ್ನ ಮೇಡಮ್ಮೇ ಕರೆಕ್ಷನ್ ಮಾಡ್ತಾ ಇದ್ದರು ( ಹಾಗಾಗಿ ಕೆಲವೊಮ್ಮೆ ರಿಯಾಯ್ತಿ ಸಿಕ್ತ ಇದ್ದ ವಿಚಾರ ಬಹಳ ಗೌಪ್ಯವಾದದ್ದು ಆ ದಿನಗಳಲ್ಲಿ ). ಇನ್ನು ನನ್ನ ಗುಂಪಿನ ಬೇರೆಲ್ಲ ಹುಡುಗರ ಒಳ್ಳೆ ಕೆಲಸದ ಪುಸ್ತಕಗಳನ್ನ ಕರೆಕ್ಸನ್ ಮಾಡೋ ಗುರುತರ (!!) ಜವಾಬ್ದಾರಿ ನನ್ನದು. ಬಹುಷಃ ಆ ದಿನಗಳಲ್ಲಿ ನಾನು ಬಹಳಷ್ಟು ಖುಷಿ ಪಡುತ್ತಿದ್ದ ಕೆಲಸಗಳಲ್ಲಿ ಇದು ಒಂದು (ಬೇರೆಯವರ ಒಳ್ಳೆ ಕೆಲಸದಲ್ಲಿ ತಪ್ಪು ಹುಡುಕೋದು ಖುಷಿ ಕೊಡುವ ಕೆಲಸವಲ್ಲದೇ ಮತ್ತಿನ್ನೇನು ? ! ) .

ಅಪ್ಪನಿಗೆ ಬೀಡಿ ತಂದು ಕೊಟ್ಟದ್ದು , ಬೆಳಿಗ್ಗೆ ಬೇಗನೆ ಸ್ನಾನ ಮಾಡಿದ್ದು , ಸ್ಕೂಲಿಗೆ ಬಂದದ್ದು ಎಲ್ಲವು ಒಳ್ಳೆ ಕೆಲಸಗಳ ಲಿಸ್ಟ್ ನಲ್ಲಿ ಇರುತ್ತಿದ್ದವು. ಕೆಲವೊಮ್ಮೆ ಗುಂಪಿನ ಹುಡುಗರಿಗಾಗಿ ಒಳ್ಳೆ ಕೆಲಸಗಳ ಪಟ್ಟಿ ಮಾಡಿ ಕೊಡಬೇಕಾದ ಸೋಸಿಯಲ್ ರೆಸ್ಪಾನ್ಸಿಬಿಲಿಟಿ ಕೂಡ ನನ್ನ ಮೇಲಿರುತ್ತಿತ್ತು. ಒಟ್ಟಿನಲ್ಲಿ ವಾರಕ್ಕೊಮ್ಮೆ ಒಳ್ಳೆಕೆಳಸಗಳನ್ನು ಕೆ.ಜಿ.ಗಟ್ಟಲೆ ನೋಡಬೇಕಾದ ಪರಿಸ್ಥಿತಿ ನನ್ನದು ಮತ್ತು ನನ್ನ ಸ್ನೇಹಿತರದ್ದು. ನಾವು ಒಳ್ಳೆಯದ್ದೋ ಕೆಟ್ಟದ್ದೋ ಎಂದು ನಿರ್ಧರಿಸಲಾಗದ ಒಳ್ಳೆ ಕೆಲಸಗಳು ಮೇಡಮ್ ಮುಂದೆ ಚರ್ಚೆಗೆ ಒಳಗಾಗುತ್ತಿತ್ತು. ನವಿರಾದ ಹಾಸ್ಯದ ಲೇಪನದೊಂದಿಗೆ ಕೆಲಸವನ್ನು "ಕೆಲಸ, ಒಳ್ಳೆ ಕೆಲಸ, ಕೆಟ್ಟ ಕೆಲಸ" ಎಂದು ಕೆಟಗರೈಸ್ ಮಾಡುವ ಕೆಲಸ ಎಲ್ಲರ ಮುಂದೆ ಆಗುತ್ತಿತ್ತು. ಇಷ್ಟೆಲ್ಲದ್ದರಿಂದ ಆಗುತ್ತಿದ್ದ ಉಪಯೋಗ ಅಂದರೆ ನಮ್ಮಲ್ಲಿ ನಾವು ಮಾಡುತ್ತಿದ್ದ ದೈನಂದಿನ ಕೆಲಸಗಳಲ್ಲಿ ಒಳ್ಳೆಯದನ್ನು ಗುರುತಿಸುವ ಶಕ್ತಿ ದಿನೆ ದಿನೇ ಹೆಚ್ಚಾಗುತ್ತಿದ್ದದ್ದು ಅದರ ಜೊತೆಗೆ ಹೊಸ ಹೊಸ ಒಳ್ಳೆಯ ಕೆಲಸಗಳ ಅವಿಷ್ಕಾರ ( ಹೌದು .. ಎಲ್ಲರಿಗಿಂತಲು ವಿಭಿನ್ನವಾದ ಒಳ್ಳೆಕೆಲಸ ಮಾಡಿದವರಿಗೆ ಮೇಡಮ್ ಶಬ್ಬಾಃಷ್ ಅನ್ನೋದರ ಜೊತೆಗೆ ಚಾಕೊಲೇಟ್ ಸಿಗೋ ಚಾನ್ಸಸ್ ಕೂಡ ಇರ್ತಾ ಇದ್ದದ್ದರಿಂದ ಅವಿಷ್ಕಾರ ಅತಿ ಅಗತ್ಯವಾಗಿತ್ತು ! ) . ಬಹುಶಃ ಒಳ್ಳೆಕೆಲಸಗಳನ್ನು ಬರೆದಿಡುವ ಮತ್ತು ಹುಡುಕುವ ಅಭ್ಯಾಸ ಮುಂದುವರೆದಿದ್ದರೆ ( ಹಾಗು ನಿಜವಾಗಲೂ ಅವುಗಳನ್ನು ಕಾರ್ಯ ರೂಪಕ್ಕೆ ತಂದಿದ್ದರೆ ) ಇವತ್ತು ಜಗತ್ತಿನ ಅತಿ ಒಳ್ಳೆಯ ಮನುಷ್ಯ ನಾನುಗುತ್ತಿದ್ದನೇನೋ ?!

ಆದರೇನು ಮಾಡುವುದು ಹೈಯರ್ ಪ್ರೈಮರಿ ಸ್ಕೂಲ್ ಮುಗಿದ ಮೇಲೆ ನಾನು ಬಹಳಷ್ಟು ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ( ಕೇಳುವವರು ಯಾರು ಇಲ್ಲದ್ದರಿಂದ ಅಂತ ಓದಿಕೊಳ್ಳುದು !! ) ನಾನು ಮಾಡಿದ ಒಳ್ಳೆಕೆಲಸಗಳನ್ನು ದಿನ ನಿತ್ಯ ಬರೆದಿಡಲಾಗಲಿಲ್ಲ ! ಮತ್ತೆ ನನ್ನ ಕೈಯಲ್ಲಿ ಒಳ್ಳೆ ಕೆಲಸಮಾಡಿಸಲು ಮತ್ತು ಅದನ್ನೆಲ್ಲ ಬರೆದಿಡಿಸಲು ಪ್ರೇಮ ಮಿಸ್,ಪದ್ಮ ಮಿಸ್ ಮತ್ತು ಶ್ರೀಮತಿ ಮಿಸ್ ಬರಬೇಕಾದಿತು ಮತ್ತು ಬಂದು ಪ್ರೀತಿಯಿಂದ ಗದರಿಸಬೇಕಾದೀತು?. ಹಾಗೆಯೇ ನಾನು ಪ್ರೈಮರಿ ಸ್ಕೂಲ್ ನಲ್ಲಿದ್ದಾಗ ಮಾಡಿದ್ದ ಎಲ್ಲ ಒಳ್ಳೆಯ ಕೆಲಸಗಳು ನಮ್ಮ ಅಮ್ಮ ಹಳೆ ಪಾತ್ರೆ ಮತ್ತು ಹಳೆ ಬುಕ್ ಗೆ ವಿನಿಮಿಯವಾಗಿ ಹೊಸಪಾತ್ರೆ ಕೊಂಡುಕೊಂಡಾಗ ಹೊಸರೂಪ ಪಡೆದು ಅಡುಗೆ ಮನೆ ಸೇರಿದೆ . ಹೀಗಾಗಿ ನಾನು ಒಳ್ಳೆಯವನು ಎನ್ನುವುದಕ್ಕೆ ಇದ್ದ ಒಂದೆ ಒಂದು ಸಾಕ್ಷಿ ಕೂಡ ಇಂದು ಇಲ್ಲದಾಗಿದೆ. ಅದಕ್ಕೆ ನಾನು ಬಿಡುವಿದ್ದಾಗಲೆಲ್ಲ ಅಡುಗೆ ಮನೆಯಲ್ಲಿ ಏನಾನ್ನಾದ್ರು ಹುಡುಕುತ್ತಿರುವುದು ಅಂತಾ ಹೇಳಿದರೆ ಯಾರು ನಂಬುವುದಿಲ್ಲ .. ಒಳ್ಳೆಯತನ ಮತ್ತು ನಿಜಕ್ಕೆ ಇದು ಕಾಲ ಅಲ್ಲ ಬಿಡಿ !!.

ಇಂತಿ ಒಳ್ಳೆಹುಡುಗ ( ನಿಜವಾಗ್ಲೂ ),
ಸಂತೋಷ

5 comments:

Unknown said...

ಮೊದಲ ಸಲ ನೀನು ಮಾತನಾಡುವ ರೀತಿಯಲ್ಲೆ ಬರೆದಿದ್ದೀಯ... ಓದಲಿಕ್ಕೆ ಚೆನ್ನಾಗಿದೆ. ಒಳ್ಳೆ ಕೆಲಸದ ಪುಸ್ತಕದಲ್ಲಿ ನನ್ನ ತಂಗಿಯ ಮನೆಕೆಲಸ ಮಾಡಿಕೊಟ್ಟೆ ಅಂತ ಬರೆದಿದ್ದರೆ, ಅದನ್ನು ವಿರೋದಿಸುತ್ತೇನೆ. ನನಗೆ ನೆನಪಿರುವಂತೆ ಮನೆಕೆಲಸ (home work) ಮಾಡಿಕೊಟ್ಟಿಲ್ಲ. ಅಪ್ಪಿತಪ್ಪಿ ಮನೆಕೆಲಸ ಮಾಡಲು ಸಹಾಯ ಮಾಡಿರ ಬಹುದು (ಅದು ಸರಿಯಾಗಿ ನೆನಪಿಗೆ ಬರ್ತಾಯಿಲ್ಲ). ಅಡುಗೆ ಮನೆ ಪಾತ್ರೆಗಳು ಸಂತೋಷ ಬಹಳ ಒಳ್ಳೆ ಹುಡುಗ ಅಂತ ಹೇಳ್ತಾಯಿದ್ದವು. social responsibilityಯಿಂದ ಅವುಗಳ ಭಾರ ಕಡಿಮೆ ಮಾಡ್ತೀಯ ಅಂತ......:)

Susheel Sandeep said...

ಹೆ ಹೆ ಹೆ...
ಮೀಸ್ಸ್ ಮೀಸ್ಸ್ ಸಂತೋಷ್ ಇವತ್ತು 'ಗುಡ್ ಡೀಡ್ಸ್' ಪುಸ್ತಕ ತಂದಿಲ್ಲ ಮೀಸ್ಸ್.

ಸೂಪರ್ ಮಗಾ...ನೀನು ಅಡುಗೆಮನೆಯಲ್ಲಿ ಒಳ್ಳೇತನ ಹುಡುಕೋ ಸತ್ಯ ಈಗ ಅರಿವಾಯ್ತು! :)
ಇನ್ನು ಮತ್ತೂ ಬರೆಯೋ ಒಳ್ಳೇ ಕೆಲ್ಸ ಮಾಡುವಂತಾಗಲಿ....

Santhosh Mugoor (ಸಂk) said...

ಧನ್ಯವಾದಗಳು ರಶ್ಮಿ ...ಧನ್ಯಾದಗಳು ರಶ್ಮಿ...

ಒಂದು ಸಾರಿ ಓದಲಿಕ್ಕೆ ಚೆನ್ನಾಗಿದೆ ಅಂದಿದ್ದಕ್ಕೆ. ಇನ್ನೊಂದು ಸಾರಿ ನಾನು ಮಾತಾಡುವ ರೀತಿಯಲ್ಲಿ ಬರೆದದ್ದು ಚೆನ್ನಾಗಿದೆ ಅಂತಾ ಹೇಳಿ ನಾನು ಚೆನ್ನಾಗಿ ಮಾತನಾಡುತ್ತೇನೆ ಅಂತ ಒಪ್ಪಿಕೊಂಡಿದ್ದಕ್ಕೆ !!

ಧನ್ಯವಾದಗಳು ಸುಶೀಲ್,

ಇನ್ನು ಮುಂದೆ ಹೀಗೆ ಸತ್ಯದರ್ಶನ ಮಾಡಿಸ್ತಾ ಇರೋಣ ಅಂತ ಅನ್ಕೊಂಡಿದ್ದೀನಿ.ಇನ್ನಾದರು ಜಗತ್ತಿಗೆ ನನ್ನ ಒಳ್ಳೆತನದ ಅರಿವಾಗಲಿ ಅಂತ !

Savi-Ruchi said...

aduge maneli ollethana huduko concept odi bahala nagu banthu..
adbhutha kalpane :)

Santhosh Mugoor (ಸಂk) said...

@ ಸುಷ್ಮ :
ನೀವು ನಕ್ಕಿದ್ದು ಸಂತೋಷ !
ಅದು ಕಲ್ಪನೆ ಅಲ್ಲ ...ನಿಜ ಅಂದರೆ ಯಾರು ನಂಬುತ್ತಿಲ್ಲ :)
ಬಲು ಕಷ್ಟ ಒಳ್ಳೆತನವನ್ನು ಪ್ರೂವ್ ಮಾಡ್ಕೊಳ್ಳೋದು. ಪ್ರೂವ್ ಮಾಡ್ಕೊಳೋಕ್ಕಾಗಿ ಇನ್ನು ಮುಂದೆ ರೆಗ್ಯುಲರ್ ಆಗಿ ಒಳ್ಳೆಕೆಲಸದ ಪುಸ್ತಕ ಬರೀಬೇಕಾದೀತು ಬಹುಶಃ.