Pages

5/21/13

ಬದ್ನೆಕಾಯಿ ಬಜ್ಜಿ ಮತ್ತು ...............



ಬದನೆಕಾಯಿ ಬಜ್ಜಿ ಮಾಡಲು ಮುಖ್ಯವಾಗಿ ಬೇಕಾದ್ದು ಬದನೆಕಾಯಿ...ಗುಂಡು ಬದ್ನೆ ಕಾಯಿ !!   ಗುಂಡು ಬದನೆಕಾಯಿಯನ್ನು ತೆಳ್ಳಗೆ ಬಿಲ್ಲೆಯ ಆಕಾರದಲ್ಲಿ ಕೊಯ್ದಿಟ್ಟು ಕೊಳ್ಳುವುದು.  ಕೊಯ್ದಿಟ್ಟ ಬದ್ನೆಕಾಯಿಯನ್ನು ಬೇರೆಲ್ಲ ಬಜ್ಜಿ ಮಾಡುವ ಹಾಗೆ, ಕಲಸಿಟ್ಟು ಕೊಂಡ ಕಡಲೆಹಿಟ್ಟು ( ರುಚಿಗೆ ತಕ್ಕಷ್ಟು ಉಪ್ಪು,ಕಾರ ಬೇರೆಸಿದ್ದು ) ನಲ್ಲಿ ಅದ್ದಿ ಕುದಿಯುತ್ತಿರುವ ಎಣ್ಣೆಯಲ್ಲಿ ತೇಲಿ ಬಿಡುವುದು. ತೇಲಿಬಿಟ್ಟ ಕಡಲೆಹಿಟ್ಟು ಲೇಪಿತ ಬದ್ನೆಕಾಯಿ ಕೆಂಬಣ್ಣ ತಿರುಗುವವರೆಗೆ ಕಾದಿದ್ದು ಎಣ್ಣೆಯ ಬಾಣಲಿಯಿಂದ ತೆಗೆದು ಬೇರೆ ಪಾತ್ರೆಗೆ ಹಾಕಿಕೊಳ್ಳುವುದು. ಇನ್ನೇನಿದ್ದರು ತಿನ್ನಲು ಸಾಧ್ಯ ಎನಿಸುವಷ್ಟು ಬಿಸಿ ಆರುವವರೆಗಿನ ಕಾಯುವಿಕೆ :-).

ಸರಳವಾಗಿ ಹೇಳುವುದಾದರೆ ಸಾಕಷ್ಟು ಕಾಯಿಸಿದ ಎಣ್ಣೆಯಲ್ಲಿ ಹಿಟ್ಟಿನಲ್ಲಿ ಅದ್ದಿದ ಬದ್ನೆಕಾಯ್ ಬಿಲ್ಲೆಯನ್ನು ಕೆಂಪಾಗುವವರೆಗೆ ಕಾಯಿಸಿ ನಂತರ ಬಾಯಿಗೇರಿಸಲು ಬಿಸಿ ಆರಲೆಂದು ಕಾಯುತ್ತಾ ಕೂರುವುದು:-)

ಓಹೋ ಮರೆತಿದ್ದೆ ಮೇಲೆ ಹೇಳಿದಷ್ಟೆ ಮಾಡಿದರೆ ಬದನೆಕಾಯಿ ಬಜ್ಜಿ ಹೆಚ್ಚು ರುಚಿಸದೆ ಇರಬಹುದು. ಬದ್ನೆ ಕಾಯಿ ಬಿಲ್ಲೆಯನ್ನು ಕಡಲೆ ಹಿಟ್ಟಿನಲ್ಲಿ ಅದ್ದುವ ಮೊದಲೆ ಖಾರವಾದ ಚಟ್ನಿಯನ್ನು ಲೇಪಿಸಬೇಕು. ಖಾರ ಎಷ್ಟಿರಬೇಕು ಅದು ನಿಮ್ಮ ನಾಲಗೆಯ ರುಚಿಗೆ ಬಿಟ್ಟಿದ್ದು :)

ಕರಿಬೇವು, ಕೊತ್ತಂಬರಿ, ಪುದಿನ, ಜೀರಗೆ, ಹಸಿಮೆಣಸಿನಕಾಯಿ ಮತ್ತು ಉಪ್ಪನ್ನು ಬಳಸಿಕೊಂಡು ಚಟ್ನಿಯನ್ನು ತಯಾರಿಸಿಕೊಳ್ಳಬಹುದು. ಹಸಿಮೆಣಸಿನಕಾಯಿ ಮತ್ತು ಜೀರಿಗೆಯನ್ನು ಎಣ್ಣೆಯಲ್ಲಿ ಕೆಂಪಾಗುವವರೆಗೆ ಹುರಿದು ಕೊಂಡು...ನಂತರ ಕರಿಬೇವು, ಕೊತ್ತಂಬರಿ, ಪುದಿನ ಸೊಪ್ಪಿನೊಂದಿಗೆ ಅರೆದು ಕೊಳ್ಳಿ. ಅರೆದು ಕೊಳ್ಳುವಾಗ ಬೇಕಾಗುವಷ್ಟು ಉಪ್ಪು ...ಬೇಕೆನಿಸಿದರೆ ಬೆಳ್ಳುಳಿ ಬೆರೆಸಿಕೊಳ್ಳಿ. ಚಟ್ನಿಗೆ ಹಾಕುವ ಪದಾರ್ಥಗಳಲ್ಲಿ ಮತ್ತು ಅಳತೆಯಲ್ಲಿ ಪ್ರಯೋಗಮಾಡಿದರೆ ಬದ್ನೆ ಕಾಯಿ ಬಜ್ಜಿ ಮತ್ತಷ್ಟು ರುಚಿಗಟ್ಟಬಹ್ದು...ಇಲ್ಲವೇ ರುಚಿ ಕೆಟ್ಟ ಬಹುದು !

ಇಷ್ಟೆಲ್ಲ ಮಾಡಿದ ಮೇಲೆ ಬದ್ನೆ ಕಾಯಿ ಬಜ್ಜಿ ಹೆಚ್ಚು ರುಚಿಸುತ್ತದೆ ಹಾಗೂ ನಿಮಗೆ ಇಷ್ಟವಾಗುತ್ತದೆ ಅಂದರೆ ತಪ್ಪಾದೀತು....

ನನ್ನ ವಿಚಾರವನ್ನೆ ತೆಗೆದು ಕೊಂಡರೆ ...ಮೊನ್ನೆ ಮೊನ್ನೆ ತಾನೆ ಗದಗಿಗೆ ಹೋಗಿದ್ದೆ. ಅಲ್ಲಿನ ಸ್ಟೇಷನ್ ರಸ್ತೆಯಲ್ಲಿ ತಿಂದ ಬದ್ನೆ ಕಾಯಿ ಬಜ್ಜಿ ಬಹಳ ರುಚಿಸಿತು. ಅದಕ್ಕೆ ಕಾರಣ ಜೊತೆಯಲ್ಲಿದ್ದ ಗೆಳೆಯರು, ಗದಗಿನ ವಾತಾವರಣ, ಲಕ್ಕುಂಡಿಯಲ್ಲಿ ಕಣ್ತುಂಬಿಕ್ಕೊಂಡ ಚಾಲುಕ್ಯರ ಕಾಲದ ಶಿಲ್ಪಗಳು, ಅಡವೇಶ ವಿವರಿಸಿದ ಕಲೆಯ ಹಿಂದಣ ಚರಿತ್ರೆ, ಗದುಗಿನ ನಾರಾಯಣನ ಚೆಲುವು ಮತ್ತು ಕಿವಿಯಲ್ಲಿ ಹಾಡಿಕೊಳ್ಳುತ್ತಿದ್ದ ಕುಮಾರವ್ಯಾಸನ ಸಾಲುಗಳು...ಇವೆಲ್ಲವು ಬಜ್ಜಿಗೆ ರುಚಿಯನ್ನು ಎಷ್ಟು ಹೆಚ್ಚಿಸಿದವು ಅಂದ್ರೆ .. ನನ್ನ ಬಳಿ ಅಳೆದು ಸುರಿದು ಹೇಳುವ ಸಾಧನವಿಲ್ಲ. ಹಾಗೆ ಇದೆಲ್ಲವನ್ನು ಬದ್ನೆಕಾಯಿ ಬಜ್ಜಿಗೆ ಎಷ್ಟು ಪ್ರಮಾಣದಲ್ಲಿ ಸೇರಿಸಿಬೇಕು ಅಂತ ಹೇಳಲು ನನ್ನಿಂದ ಸಾಧ್ಯವಿಲ್ಲ. ಇಷ್ಟು ಮಾತ್ರ ಹೇಳಬಲ್ಲೆ...ಕಾವ್ಯ ಮತ್ತು ತಿನಿಸು ರುಚಿಸುವುದಕ್ಕೆ ಒಂದು ಸುಂದರವಾದ ವಾತಾವರಣದ ಹಿನ್ನಲೆಯಲ್ಲಿರಬೇಕು. ಅಸ್ವಾದಿಸುವ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳ ಬೇಕಾದ್ದು ನಾವೇ, ಬಜ್ಜಿ ಮಾಡುವುದಕ್ಕಿಂತ ಮುಂಚೆ ಅದನ್ನು ಸಿದ್ದ ಪಡಿಸಿಕೊಳ್ಳುವುದನ್ನು ಮರೆಯದಿರಿ !! 

ನಾಲಗೆ ನೀರೂರುವಂತೆ ಮಾಡಿ ಬಹಳ ದಿನಗಳಿಂದ ಏನನ್ನು ಬರೆಯದೆ ಬರಡಾಗಿದ್ದ ನನ್ನೊಳಗಿನ ಬರಹಗಾರನನ್ನು ಮತ್ತೆ ಬಡಿದೇಳಿಸಿದ ಗದಗಿನ ಬದ್ನೆ ಕಾಯಿ ಬಜ್ಜಿಗೂ ಮತ್ತು ಮೇಲೆ ಹೇಳಿದ ರುಚಿಗಟ್ಟಿಸಿದ ವಾತಾವರಣಕ್ಕೂ ಒಂದು ಸಲಾಮ್.

ಅಡಿಟಿಪ್ಪಣಿ : ಬರಹದಲ್ಲಿ ಬಳಸಿಕೊಂಡಿರುವ ಚಿತ್ರಗಳು ಗದಗಿನ ಸ್ಟೇಷನ್ ರಸ್ತೆಯ ಬಜ್ಜಿಯಂಗಡಿಯಲ್ಲಿ ಗೆಳೆಯ ಕಾರ್ತಿಕ ತೆಗೆದದ್ದು.

1 comment:

Karthic B P said...

ಬಿಲ್ಲೆಗಳನ್ನು ನಡುವಲ್ಲಿ ಸೀಳಬೇಕು ಖಾರ ಲೇಇಸುವುದಕ್ಕೆ.. ನೀವು ಹೇಳೇ ಇಲ್ಲ.. :P