Pages

4/11/20

ಮೌನದ ಮಾತು

ಆಡದ ಮಾತುಗಳೂ ಕಾಡುವುದು
ಮೌನ ಮಾತಾದಾಗ!

ಅದೇನು ಹೇಳುವಿರಿ ನೀವು
"ಮೌನ ಮಾತಾಗುವುದೇ?"

ಯಾಕೆ? ಕೇಳಲಿಲ್ಲವೇನು?
ಎಂದು ಬಾಯಿಬಿಡದ
ಅಮ್ಮನ ಪ್ರೇಮದ
ಮನದಾಳದ ಮಾತುಗಳು

ಯಾಕೆ? ಕಾಣಲಿಲ್ಲವೇನು
ಅಪ್ಪನ ಶಿಸ್ತು ಕೋಪದ
ಒರಟು ನಡೆಯ ನಡುವೆ
ಕೇಳಿಸದ ಮಾತುಗಳು

ಯಾಕೆ? ಕೇಳಿಲ್ಲವೇನು
ವಟಗುಟ್ಟುವ ಅವನ
ಹಂಬಲಿಕೆಯ ನಡುವಿನ
ಪಿಸುಮಾತಗಳು

ಹೋಗಲಿ ಬಿಡಿ..

ಯಾಕೆ? ಕೇಳಿಸಲಿಲ್ಲವೇ
ನಿಮಗೆ ನಿಮ್ಮದೇ
ಮನದಲ್ಲಿ ನಡೆವ
ತುಮುಲಗಳು
ಅದರ ...ಶಬ್ದಗಳು..

ಹಾಗಾದರೆ...
ಅಕ್ಕ ಹೇಳಿದ ಹಾಗೆ
ಹುಡಕಬೇಕಿದೆ
"ನಿಶ್ಯಬ್ದದೊಳಗಿನ ಶಬ್ದ"ವ...
"ಮೌನದೊಳಗಿನ ಮಾತು"
ಕೇಳಲು!

ಹುಡುಕಿದಂದು
"ಮಾತು ಬೆಳ್ಳಿ ಮೌನ ಬಂಗಾರ"ವಾದೀತು !!
ಮೂಡುವುದಾಗ
ಬಂಗಾರದ (ಮೌನದ) ಮಾತು  !

No comments: